KAE KPSC

By Vishal v

ಬೆಳಿಗ್ಗೆಯಿಂದ ಫೋನ್ ಎತ್ತಿದ್ಕೂಡ್ಲೆ ಒಂದೇ ಮೆಸೇಜ್ ಎಲ್ಲ ಗ್ರೂಪುಗಳಲ್ಲೂ – “72,186 ಹುದ್ದೆ ನೇಮಕಾತಿ!”. ಆ ಎಮೋಜಿಗಳ ಸಮೇತ, ಫಾರ್ವರ್ಡ್ ಮೇಲೆ ಫಾರ್ವರ್ಡ್. ನಿಜ ಹೇಳ್ಬೇಕಂದ್ರೆ ಇಂಥಾ ಮೆಸೇಜ್ ಬಂತು ಅಂದ್ರೆ ಮೊದ್ಲು ಖುಷಿ ಆಗುತ್ತೆ, ಆಮೇಲೆ ಒಂದ್ ಚೂರು ಡೌಟ್ ಬರುತ್ತೆ – ಇದು ನಿಜಾನಾ, ಇಲ್ಲ ಯಾವಾಗ್ಲೂ ಇರೋ ತರ ಸ್ವಲ್ಪ ದೊಡ್ಡ ಮಾಡಿ ಹೇಳಿದ್ದಾ ಅಂತ. ಹಾಗಾಗಿ ನಾನೇ ಸ್ವಲ್ಪ ಹುಡುಕಿ, ಸುದ್ದಿ ಮೂಲಗಳಲ್ಲಿ ಬಂದಿರೋದನ್ನ ನೋಡಿ, ಇಲ್ಲಿ ಸ್ವಲ್ಪ ಸರಳವಾಗಿ ಬರೀತಿದ್ದೀನಿ.

ಮೊದ್ಲು, ನಿಜವಾಗ್ಲೂ ಆಗಿರೋದೇನು?


72,186 ಹುದ್ದೆ?

72,186 ಹುದ್ದೆ ಅನ್ನೋ ಸಂಖ್ಯೆ ಸುಳ್ಳಲ್ಲ, ಇದು ನಿಜ. ಆರ್ಥಿಕ ಇಲಾಖೆ ಇಷ್ಟೂ ಹುದ್ದೆಗಳ ನೇರ ನೇಮಕಾತಿಗೆ ಒಪ್ಪಿಗೆ ಕೊಟ್ಟಿದೆ. ಆದ್ರೆ ಇದೊಂದೇ ಸಲಕ್ಕೆ ಹೊಸದಾಗಿ ಬಂದ ಹುದ್ದೆ ಅಂದ್ಕೋಬೇಡಿ – ಇದ್ರಲ್ಲಿ ಎರಡು ಭಾಗ ಇದೆ.

ಒಂದು, 2023-24ನೇ ಸಾಲಿನಿಂದ್ಲೂ ಬಾಕಿ ಉಳಿದಿದ್ದ 40,009 ಹುದ್ದೆಗಳು. ಇವು ಬೇರೆ ಬೇರೆ ಇಲಾಖೆಗಳಲ್ಲಿ ಖಾಲಿ ಇದ್ವು, ಆದ್ರೆ ಯಾವ್ದೋ ಒಂದ್ ಕಾರಣಕ್ಕೆ ಭರ್ತಿ ಆಗಿರ್ಲಿಲ್ಲ. ಎರಡು, ಕಲ್ಯಾಣ-ಕರ್ನಾಟಕ ಭಾಗದ ಸ್ಥಳೀಯ ವೃಂದದಲ್ಲಿ ಖಾಲಿ ಇರೋ ಹುದ್ದೆಗಳ ಪೈಕಿ ಶೇ.80ರಷ್ಟು, ಅಂದ್ರೆ 32,177 ಹುದ್ದೆ. ಈ ಎರಡನ್ನೂ ಸೇರಿಸಿದ್ರೆ ಈ 72 ಸಾವಿರದ ಸಂಖ್ಯೆ ಬರೋದು.

ಒಳಮೀಸಲಾತಿ ವಿಷಯ ಕೋರ್ಟ್‌ನಲ್ಲಿತ್ತಲ್ಲ, ಅದ್ಕೆ ನೇಮಕಾತಿ ಪ್ರಕ್ರಿಯೆ ಎಲ್ಲಾ ಸ್ವಲ್ಪ ಕಾಲ ನಿಂತೇ ಹೋಗಿತ್ತು. ಈಗ ಆ ಕೇಸ್ ಇತ್ಯರ್ಥ ಆಗಿ, ಮತ್ತೆ ಗಾಡಿ ಮುಂದೆ ಹೊರಟಿದೆ ಅಂತ ಹೇಳ್ಬಹುದು.

Kea Karnataka 72,000

ಸಮಯ ಎಷ್ಟು ತಗೋಬಹುದು?

ಸರ್ಕಾರ ಈ ಸಲ ಒಂದ್ ಡೆಡ್‌ಲೈನ್ ಹಾಕ್ಕೊಂಡಂತಿದೆ – ಎರಡು ತಿಂಗಳ ಒಳಗೆ ಅಧಿಸೂಚನೆ, ನಾಲ್ಕು ತಿಂಗಳ ಒಳಗೆ ಪರೀಕ್ಷೆ, ಆರು ತಿಂಗಳ ಒಳಗೆ ಇಡೀ ಪ್ರಕ್ರಿಯೆ ಮುಗಿಸಿ ನೇಮಕಾತಿ ಪತ್ರ ಕೊಡೋದು ಅಂತ. ಇದೆಲ್ಲ ಟೈಮ್‌ಲೈನ್ ಸರಿಯಾಗಿ ಪಾಲನೆ ಆಗ್ಬೇಕು ಅಂತ, ಅಪರ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೇ ಮೇಲುಸ್ತುವಾರಿ ಜವಾಬ್ದಾರಿ ಕೊಟ್ಟಿದ್ದಾರೆ. ಪರೀಕ್ಷೆ ಆನ್‌ಲೈನ್‌ನಲ್ಲೇ ಮಾಡಿಸಿ, ಪ್ರತಿ ಹಂತ ಟ್ರ್ಯಾಕ್ ಮಾಡ್ತಾರಂತೆ – ಅಕ್ರಮ ಆಗ್ಬಾರ್ದು ಅನ್ನೋ ಉದ್ದೇಶಕ್ಕೆ.

ಈಗ ಹೇಳಿದ್ರೆ ಚೆನ್ನಾಗಿ ಕೇಳುತ್ತೆ, ಆದ್ರೆ ಇಂಥಾ ಡೆಡ್‌ಲೈನ್‌ಗಳು ಕರ್ನಾಟಕದಲ್ಲಿ ಎಷ್ಟು ಸರ್ತಿ ಸರಿಯಾಗಿ ಪಾಲನೆ ಆಗಿವೆ ಅಂತ ನಮಗೆಲ್ಲ ಗೊತ್ತೇ ಇದೆ. ಹಾಗಂತ ನಿರಾಶೆ ಆಗೋ ಅಗತ್ಯ ಇಲ್ಲ, ಆದ್ರೆ “ಆರೇ ತಿಂಗಳಲ್ಲಿ ಜಾಬ್ ಪಕ್ಕಾ” ಅಂತ ಪ್ಲಾನ್ ಮಾಡ್ಕೊಂಡ್ ಬಿಡ್ಬೇಡಿ.

ಯಾವ್ದೆಲ್ಲ ಹುದ್ದೆ ಬರ್ಬಹುದು ಅಂತ ಸುದ್ದಿ ಇದೆ

ಶೀಘ್ರದಲ್ಲೇ ಅಧಿಸೂಚನೆ ಬರ್ಬಹುದು ಅಂತ ಕೇಳಿಬರ್ತಿರೋ ಪ್ರಮುಖ ಹುದ್ದೆಗಳ ಪೈಕಿ ಅತಿ ದೊಡ್ಡದು ಸರ್ಕಾರಿ ಶಾಲಾ ಶಿಕ್ಷಕರದ್ದೇ. ಇದ್ರ ಜೊತೆ ಕಾರಾಗೃಹ ಇಲಾಖೆ, ಹಾಸ್ಟೆಲ್ ವಾರ್ಡನ್, AE-AEE, ಅಬಕಾರಿ ಸಬ್ ಇನ್ಸ್‌ಪೆಕ್ಟರ್-ಕಾನ್‌ಸ್ಟೇಬಲ್, ಸಿವಿಲ್ PSI, ಬೇರೆ ಬೇರೆ ಇಲಾಖೆಗಳ FDA-SDA, ಕಾಲೇಜು-ತಾಂತ್ರಿಕ ಶಿಕ್ಷಣ ಇಲಾಖೆಯ ಅಸಿಸ್ಟೆಂಟ್ ಪ್ರೊಫೆಸರ್/ಲೆಕ್ಚರರ್ ಹುದ್ದೆಗಳು – ಹೀಗೆ ಪಟ್ಟಿ ಇದೆ. ಆಡಿಟ್ ಆಫೀಸರ್, ಅಸಿಸ್ಟೆಂಟ್ ಕಂಟ್ರೋಲರ್, ಜೂನಿಯರ್ ಪವರ್‌ಮನ್, ಜೂನಿಯರ್ ಸ್ಟೇಷನ್ ಅಟೆಂಡೆಂಟ್, ಆಹಾರ ಸುರಕ್ಷತಾ ವಿಭಾಗದ ಹುದ್ದೆಗಳಂತಹ ಸ್ವಲ್ಪ ಸಣ್ಣ ಆದ್ರೂ ಮುಖ್ಯ ಆಗಿರೋ ಹುದ್ದೆಗಳೂ ಸಾಲಿನಲ್ಲಿವೆ.

ಆದ್ರೆ ಒಂದ್ ಮಾತು ಹೇಳ್ಲೇಬೇಕು

ಫಾರ್ವರ್ಡ್ ಆಗ್ತಿರೋ ಮೆಸೇಜ್‌ಗಳಲ್ಲಿ ಪ್ರತಿ ಇಲಾಖೆಗೂ ಇಂತಿಷ್ಟೇ ಹುದ್ದೆ, ಇಂತಿಷ್ಟೇ ಕಾಲಮಿತಿ ಅಂತ ಕೊಟ್ಟಿರೋ ಡೀಟೇಲ್ಸ್ ಎಲ್ಲಾ ಸ್ವಲ್ಪ ಬೇರೆ ಬೇರೆ ಥರ ಕಾಣ್ತಿವೆ ಬೇರೆ ಬೇರೆ ಕಡೆ. ಒಟ್ಟು 72,186 ಅನ್ನೋದು ಪಕ್ಕಾ. ಆದ್ರೆ ಯಾವ್ ಇಲಾಖೆಗೆ ಎಷ್ಟು, ಪರೀಕ್ಷೆ ಯಾವಾಗ – ಇಂಥಾ ಎಕ್ಸಾಕ್ಟ್ ವಿಷಯಕ್ಕೆ ಫಾರ್ವರ್ಡ್ ಮೆಸೇಜ್ ನಂಬೋ ಬದ್ಲು, ಆಯಾ ಇಲಾಖೆ ಇಲ್ಲ KPSC/KEA ಅಧಿಕೃತ ಸೈಟ್ ಚೆಕ್ ಮಾಡೋದೇ ಸೇಫ್.

ಈಗ ನಾವೇನ್ ಮಾಡ್ಬೇಕು?

ಪ್ರತಿ ಹುದ್ದೆಗೂ ಪ್ರತ್ಯೇಕ ಅಧಿಸೂಚನೆ ಇನ್ನೂ ಬಂದಿಲ್ಲ ಅನ್ನೋದ್ ಮರೀಬೇಡಿ. ಸರ್ಕಾರ ಒಪ್ಪಿಗೆ ಕೊಟ್ಟಿದೆ ಅಂದ್ರೆ ಪ್ರಕ್ರಿಯೆ ಶುರುವಾಗಿದೆ ಅಂತ ಅರ್ಥ, ನಾಳೆನೇ ಪರೀಕ್ಷೆ ಬರುತ್ತೆ ಅಂತಲ್ಲ. ಹಾಗಾಗಿ ಈಗ್ಲಿಂದ್ಲೇ ಆಯಾ ಇಲಾಖೆ ವೆಬ್‌ಸೈಟ್ ಆಗಾಗ ಚೆಕ್ ಮಾಡ್ತಿರಿ, ಪಠ್ಯಕ್ರಮ – ಹಳೇ ಪ್ರಶ್ನೆಪತ್ರಿಕೆ ಓದೋದ್ ಶುರುಮಾಡಿ, ಜಾತಿ-ಆದಾಯ ಪ್ರಮಾಣಪತ್ರದಂತಾ ಡಾಕ್ಯುಮೆಂಟ್ಸ್ ರೆಡಿ ಇಟ್ಕೊಳ್ಳಿ. ಗ್ರೂಪ್‌ನಲ್ಲಿ ಬರೋ ಮೆಸೇಜ್ ನೋಡಿ ಟೆನ್ಷನ್ ತಗೊಳ್ಳೋ ಬದ್ಲು ಅಧಿಕೃತ ಮೂಲದಿಂದ್ಲೇ ಕನ್ಫರ್ಮ್ ಮಾಡ್ಕೊಳ್ಳಿ.

ಒಟ್ಟಿನಲ್ಲಿ ಹೇಳೋದಾದ್ರೆ, ಇದೊಂದ್ ಒಳ್ಳೇ ಸುದ್ದಿನೇ, ಆಸ್ಪೆಕ್ಟೆಂಟ್ಸ್‌ಗೆ ಖುಷಿ ಆಗೋ ವಿಷ್ಯಾನೇ. ಆದ್ರೆ ಸಂಖ್ಯೆ ಕೇಳಿ ಎಕ್ಸೈಟ್ ಆಗೋ ಬದ್ಲು, ಸ್ವಲ್ಪ ತಾಳ್ಮೆಯಿಂದ ಅಧಿಕೃತ ಅಧಿಸೂಚನೆಗೆ ಕಾಯ್ತಾ, ಜೊತೆಗೇ ತಯಾರಿ ಮುಂದುವರಿಸಿ. ಆಗ ಆ ಅಧಿಸೂಚನೆ ಬಂದಾಗ ನೀವು ರೆಡಿ ಆಗಿ .

source from KEA

Leave a Reply

Your email address will not be published. Required fields are marked *